ಮಂಗಳವಾರ, ಜನವರಿ 18, 2011

"ಹೋ ದುಂಬಿ ನಾ ಬಂದೆ ಹೂ ಮೈದುಂಬಿ "

ಇವತ್ತು ಬೆಳಗಿನಿದ ಯಾಕೋ ನಿನ್ನ ನೆನಪುಗಳೇ ಕಾಡ್ತಾ ಇವೆ. ನಿನ್ನೆ ನನ್ನ ಹುಟ್ಟಿದ ಹಬ್ಬ. ನೆನಪೂ ಆಗಿಲ್ವೇನೋ ನಿನಗೆ ? ಅಥವಾ ನೆನಪಿದ್ದೂ ಮರೆತುಬಿಟ್ಟೆಯಾ? ನಿನ್ನ ಒಂದು phone callಗಾಗಿ ಕಾದಿದ್ದೆ. ಆದರೆ ನೀನು ನೆನಪಾಗಿ ಕಾಡಿದ್ದೆ. 'ಇವನ' ಜೊತೆ ಮದುವೆಯಾದ ನಂತರದ ನನ್ನ ಮೊದಲನೇ ಹುಟ್ಟಿದ ಹಬ್ಬ. ಮಧ್ಯ ರಾತ್ರಿಯಲಿ ಇವನ ಒಂದು ಹಾರೈಕೆಗಾಗಿ ಹಂಬಲಿಸಿದ್ದೆ. ರಾತ್ರೆ ಪಕ್ಕದಲ್ಲಿ ನನ್ನ ಪಕ್ಕದಲ್ಲಿ ಮಲಗಿ, ಸುಖ ನಿದ್ದೆಯಲಿ ಗೊರಕೆ ಹೊಡೆಯುತ್ತಿದ್ದವನ ಕಂಡು ನನ್ನ ಕಣ್ಣಂಚು ಒದ್ದೆಯಾಗಿ, ಕೆನ್ನೆಗಳೂ ಒದ್ದೆಯಾಗಿದ್ದವು. ಕೊನೆಗೆ ಸೋತು ನೆನಪಿಸಿದ್ದೂ ನಾನೇ. "Oh my Darling I am sorry" ಎಂದು ಹಲ್ಕಿರಿಯುತ್ತಾ wish ಮಾಡಿದವನನ್ನು ನಿನ್ನ ಜೊತೆ ಹೋಲಿಸಿ ತೂಗಿದ್ದೆ ನಾನು. ಹೃದಯ ನಿನ್ನ ಹೆಸರನ್ನೇ ಅರಚುತ್ತಿತ್ತು.ನೀನಿದ್ದಿದ್ದರೆ .... ಥತ್ ಮತ್ತೆ ಜಾರುತ್ತೇನೆ ನೋಡು ಕಲ್ಪನೆಯ ಮಡಿಲಿಗೆ. ಈ ಹುಚ್ಚು ಮನಸೇ ಹೀಗೆ ಅಲ್ವಾ? ಸಿಗದಿದ್ದರ ಕಡೆಗೇ ತುಡಿಯುತ್ತದೆ.! 


ಅದೆಷ್ಟು ಖುಷಿಯ ದಿನಗಳು ಅವು,ನಿನ್ನ ಜೊತೆಗೆ ಕಳೆದದ್ದು. ಆ ಭಾನುವಾರಗಳಿಗಾಗಿ ಹಂಬಲಿಸಿದ್ದು. ಗಂಟೆಗಟ್ಟಲೆ ಮಾತನಾಡಿದ್ದು. ಮುಗಿಯದ ರೋಡಿನ ಉದ್ದಕ್ಕೆ ಮುಗುಮ್ಮಾಗಿ ನಡೆದದ್ದು, ನಾವೆಷ್ಟು ನಡೆದಿದ್ದೆವು ಎನ್ನುವುದು, ಪಕ್ಕಾ ಆಳಸಿಯಂತೆ ಬಿದ್ದುಕೊಂಡಿರುವ ಆ ರಸ್ತೆಗೂ ಗೊತ್ತಿರಲಿಕ್ಕಿಲ್ಲ. ನಡೆಯಲಾಗದೆ ನಾನು ಸೋತು ಕುಳಿತದ್ದು, ನೀನು ಕೈಹಿಡಿದು ಎತ್ತಿದ್ದು. ರೋಡಿನ ತಿರುವಲ್ಲಿ ನನ್ನ ಉದ್ದದ ಜಡೆಯ ನೀನು ಹೆಣೆದದ್ದು. "ಜೀವನ ಪೂರ್ತಿ ನಿನ್ನ ಜಡೆ ಹೆಣೆಯುವ ಸೌಭಾಗ್ಯ ನನ್ನದಾಗಲಿ" ಎಂದು ನೀನು ಅಂದಾಗ, ನನ್ನ ಉತ್ತರ ಎರಡು ಹನಿ ಕಣ್ಣೀರಾಗಿತ್ತು.

ಯಾಕೆ ಈ ಜೀವನದಲ್ಲಿ ಯಾರ್ಯಾರದ್ದೋ ಪ್ರವೇಶವಾಗಿ ಬಿಡುತ್ತದೆ ? ಕೊನೆಗೆ ಎಲ್ಲರೂ ಉಳಿಸುವುದು 'ಮನದಲ್ಲಿ ಒಂದು ಹಿಡಿ ನೆನಪು, ಗಲ್ಲದ ಮೇಲೆ ಕಣ್ಣೀರ ಕರೆ'. ಜೀವನವ ನಿನ್ನ ಜೊತೆ ಕಳೆಯಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ,ನಿನ್ನ ಪ್ರೀತಿಸಿದೆ.ವಯಸ್ಸಿನ ಅಂತರ, ಜಾತಿ ಅದಾವುದೂ ಕಾಡಲೇ ಇಲ್ಲ. ನಿನ್ನ ಮುಗ್ಧ ಪ್ರೀತಿಯ ಹೊಳೆಯಲ್ಲಿ ಅಕ್ಷರಶಃ ಕೊಚ್ಚಿ ಹೋಗಿದ್ದೆ ನಾನು.


ಅದೆಷ್ಟು ಸಂಭ್ರಮದಿಂದ ಆಚರಿಸಿದ್ದೆ ನೀನು, ನನ್ನ ಹುಟ್ಟು ಹಬ್ಬವ. ಕಡಲ ತಡಿಯಲ್ಲಿ ನಾನು ಕೇಕ್ ಕತ್ತರಿಸಿದಾಗ ಸುತ್ತಲಿನ ಅಪರಿಚಿತರೆಲ್ಲ "Happy birth day too you" ಅಂದಿದ್ದರಲ್ವಾ ? ನಾನು ಸಣ್ಣಗೆ ನಡುಗುತ್ತಿದ್ದೆ. ಆ ದಿನ ನೀ ಕೊಟ್ಟಿದ್ದ ಕಾರ್ಡ್, ಹಾಗೂ ಗಿಫ್ಟ್ ಇನ್ನೂ ನನ್ನ ಬಳಿ ಭದ್ರವಾಗಿವೆ. ಆ ದಿನ ಅಚ್ಚಳಿಯದ ನೆನಪಾಗಿ, ಬೆಚ್ಚಗೆ ಕುಳಿತಿದೆ ನನ್ನ ಮನಸಿನಲ್ಲಿ.

ಕೊನೆಗೂ ನಾನಂದುಕೊಂಡಂತೆ ಆಯಿತು, ನಿನ್ನ ಜೊತೆಗೆ ಜೀವನವೆಲ್ಲ ಕಳೆಯುವ ಭಾಗ್ಯ ನನ್ನದಾಗಲೇ ಇಲ್ಲ.

ನಾನು ಬೇರೆ ಹುಡುಗರ ಜೊತೆ ಮಾತಾಡಿದ್ದು ಗೊತ್ತಾದರೆ ನಿನ್ನ ಸಿಡುಕು, possessiveness,ಸಿಟ್ಟುಗಳಿಗೆ ನಾನು ಆಗ ಮುಸಿಮುಸಿ ನಗುತ್ತಿದ್ದೆ. ಈಗ ಆ ನೆನಪುಗಳಿಗೆ ಕಣ್ಣುಗಳು ಮಂಜಾಗುತ್ತವೆ.

ಹೌದೇನೋ? ನಿನ್ನ ಬದುಕಿನಲ್ಲಿ ಹೊಸ ಹುಡುಗಿಯೊಬ್ಬಳ ಪ್ರವೇಶವಾಗಿದೆಯಂತೆ. ನೀನು ಸಂಪೂರ್ಣವಾಗಿ ಬದಲಾಗಿದ್ದೀಯ. ಹೊಸ ಹುಡುಗಿ ನಿನ್ನ ಹಳೆಯ ನೆನಪುಗಳ ಮೇಲೆ ಪ್ರೀತಿಯ ಚಾದರವ ಹೊದೆಸಿ, ಹೊಸ ವಸಂತವ ತಂದಿದ್ದಾಳಂತೆ. ಅವಳ ಸುತ್ತಮುತ್ತಲೇ ಇತ್ತಂತೆ ನಿನ್ನ ಮಾತುಕತೆಯೆಲ್ಲ. ವೈಶಾಲಿ ಹೀಗೆಲ್ಲ ಹೇಳುತ್ತಿದ್ದರೆನನ್ನ ಹೊಟ್ಟೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ ಆಗುತ್ತಿತ್ತು.

ಯಾಕೋ ಬೇಡವೆಂದರೂ ನಿನ್ನ ನೆನಪುಗಳು ಹುಟ್ಟು ಹಬ್ಬದ ನೆಪದಲ್ಲಿ ಕಾಡುತ್ತಿವೆ. ನಿನ್ನ ಹೊಸ ಹುಡುಗಿಯ ಬಗ್ಗೆ ಸಣ್ಣ ಹೊಟ್ಟೆ ಕಿಚ್ಚೊಂದು ಶುರುವಾಗಿದೆಯಲ್ಲೋ.


ಹುಡುಗ:
ಬಾಳ ಪಯಣದಲ್ಲಿ ಎಲ್ಲ ಜೀವವು ಹಾತೊರೆಯುವುದು ಪ್ರೀತಿಗಾಗಿ. ಅದೆಲ್ಲಿಯ ಮಾಯೆಯೋ ನಿನ್ನ ಪ್ರೀತಿಸಿಬಿಟ್ಟೆ.ಅದೊಂದು ಹುಚ್ಚು ಪ್ರೀತಿ ಬಿಡು.ನಿನ್ನ ಪ್ರೀತಿಸಿದೆ,ಕನಸುಗಳ ಗೂಡು ಕಟ್ಟಿದೆ. ನನಗೆಲ್ಲಿ ಗೊತ್ತಿತ್ತು ನಾ ಕಟ್ಟಿದ್ದು ಸಮುದ್ರದ ಅಂಚಿನ ಮರಳ ಗುಬ್ಬಚ್ಚಿ ಗೂಡೆಂದು? ಕಾಲನ ಅಲೆಗೆ ಸಿಕ್ಕಿ ನುಚ್ಚು ನೂರಾಗುವುದೆಂದು? ಬದುಕು ನಾವಂದುಕೊಂಡಂತೆ ಎಲ್ಲಿರುತ್ತದೆ ಹೇಳು ? ನೀನು ನನ್ನ ಬದುಕಿನಿಂದ ಎದ್ದು ಹೋದೆ. ನಾನು ಕಣ್ಣೀರು ಬತ್ತುವಷ್ಟು ಅತ್ತಿದ್ದೆ. ತಿಂಗಳುಗಳವರೆಗೆ ದಿನವೂ ಕುಡಿದಿದ್ದೆ.

ಯಾವುದಕ್ಕೂ ಬೇಸರವಿಲ್ಲ ಬಿಡು. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡವನು ನಾನು. ಅಥವಾ ಬದುಕು ಹಾಗೆ ಅಂದುಕೊಳ್ಳುವಂತೆ ಮಾಡಿದೆ.

ನಿನ್ನ ಪ್ರೀತಿಸಿದೆ, ಕನಸ ಕಟ್ಟಿದೆ, ಅದು ಚೂರಾದಾಗ ಕುಡಿದೆ, ಅಲೆದೆ, ಬಸವಳಿದೆ. ಆದರೆ ಕಾಲಕ್ಕೆ ಎಲ್ಲ ಮರೆಸುವ ಹಕ್ಕು,ತಾಕತ್ತು ಎರಡೂ ಇದೆಯಂತೆ. ಹೌದು ನಿನ್ನ ನೆನಪು ಆಗುವುದೇ ಇಲ್ಲ ಎಂದರೂ ತಪ್ಪಲ್ಲ. ಹಿಂದೆ ನಡೆದಿದ್ದೆಲ್ಲವ ನೆನೆದು ನಕ್ಕು ಬಿಟ್ಟಿದ್ದೇನೆ. ಎಲ್ಲೋ ಒಮ್ಮೊಮ್ಮೆ ನನಗೆ ನಾನೇ ಹುಚ್ಚ ಎನಿಸಿದ್ದೂ ಇದೆ. ನನ್ನ ತಪ್ಪಲ್ಲ ವಯಸ್ಸಿನದು ಎಂದು ನನಗೆ ನಾನೇ ಸಮಾಧನಿಸಿಕೊಂಡಿದ್ದೇನೆ.


ಹೌದು ನನ್ನ ಬದುಕಲ್ಲಿ ಹೊಸ ಹುಡುಗಿಯ ಪ್ರವೇಶವಾಗಿದೆ. ಬದುಕು ಬದಲಾಗಿದೆ. ಹುಡುಗತನ ಸುಮಾರಾಗಿ ಕಳೆದು ಹೊಸ ವಸಂತ ಬಂದಿದೆ. ತನ್ನ ಚಿಗುರು ಕಣ್ಣಿನಲ್ಲಿ ನಗುವ. ಮಾತಿನ ಮಲ್ಲಿಗೆ ಶರಣಾಗಿದ್ದೇನೆ. ನನ್ನ ಬದುಕಲ್ಲಿ. ಹೊಸ ಕಿರಣ,ಚೇತನ ಹೊತ್ತು ತಂದ ಕೀರ್ತಿ ಅವಳಿಗೆ. ನಿನ್ನೆ ಉದ್ದದ ಜಡೆಯನ್ನು ಪ್ರೀತಿಸುತ್ತಿದ್ದೆನಲ್ಲ. ನನ್ನ ಜೀವನದ ಹೊಸ ಚಿಲುಮೆ ತುಂಡು ಕೂದಲಿನ ಹುಡುಗಾಟದ ಹುಡುಗಿ ! ಅದೇ ತುಂಡು ಕೂಡಲೇ ಈಗ ಇಷ್ಟವಾಗಿಬಿಟ್ಟಿದೆ.

ಇವಳು ಸ್ನೇಹಿತೆಯಾಗಿ ಜೀವನವ ಪ್ರವೇಶಿಸಿದವಳು. ತಿಂಗಳೊಳಗೆ ನನ್ನ ಮನದ ಖಾಲಿ ಚುಕ್ಕಿ ರಂಗೋಲಿಗೆ ಬಣ್ಣ ತುಂಬಿ ಬಿಟ್ಟಳು. ನಿನ್ನ ನೆನಪುಗಳ ತೆಕ್ಕೆಯಿಂದ ಹೊರ ಬಂದು ಕಡಲ ತಡಿಯಲ್ಲಿ ಮಂಡಿಯೂರಿ "ನೀ ನನಗೆ ಇಷ್ಟ. ಬದುಕಿನುದ್ದಕ್ಕೆ ತೊತೆಯಾಗುವೆಯಾ?"ಎನ್ನಲು, ನಾನು ತೆಗೆದು ಕೊಂಡಿದ್ದು ಬರೋಬ್ಬರಿ ಒಂದುವರೆ ವರುಷ . "ನಿನ್ನ ಹಳೆ ಹುಡುಗಿಗಿಂತ ಜಾಸ್ತಿ ಪ್ರೀತಿಸಿದರೆ ಮಾತ್ರ " ಎಂದು ಮಗುವಿನಂಥ ಸಿಟ್ಟು ತೋರಿದವಳಿಗೆ ಅದೇನು ಹೇಳಲಿ ಹೇಳು? ನಗು ಬಿಟ್ಟರೆ ನನ್ನಲ್ಲಿ ಏನು ಉಳಿಯುವುದೇ ಇಲ್ಲ. ಅವಳ ಜೊತೆ ಇರುವಷ್ಟು ಸಮಯ ಮಗುವಾಗಿಯೇ ಬಿಡುತ್ತೇನೆ. ಉದ್ದ ಜಡೆಯವರು ಕಂಡಾಗಲೆಲ್ಲ ಮೊಣಕೈಯಿಂದ ನನ್ನ ತಿವಿದು "ನೋಡು ನಿನ್ನ ಹಳೆ ಹುಡುಗೀ " ಎಂದು ಕಣ್ಣು ಮಿಟುಕಿಸುವಾಗ. ನನ್ನ ಉತ್ತರ ಮತ್ತೊಮ್ಮೆ ನಗೆಯೇ. !


ನನ್ನದೆಲ್ಲ ವಿಷಯಗಳೂ ಗೊತ್ತು. ಮೊದಲು ನಿನ್ನ-ನನ್ನ ಕಥೆ ಹೇಳಿದಾಗ ನಕ್ಕು "stupid guy" ಎಂದು ತಲೆಗೊಂದು ಮೊಟಕಿದ್ದಳು. ಮೊನ್ನೆ "ನೀನೇಕೆ ಉದ್ದ ಕೂದಲನ್ನು ಬಿಡುವುದಿಲ್ಲವೇ ಹುಡುಗೀ" ಎಂದಿದ್ದೆ. "ಅದ್ಯಾಕೋ? ನಿನ್ನ ಹಳೆ ಹುಡುಗಿಯ ನೆನಪು ಇನ್ನೂ ಬರತ್ತಾ ? ನಾ ಬೇಡ್ವಾ? ಹೋಗ್ತೇನೋ ನಾನೂ, ಸೊಕ್ಕು ನಿಂಗೆ !"ಎಂದು ಹೊಳೆದಂಡೆಯಂಚಿಂದ ಎದ್ದು ನಡೆದು ಬಿಟ್ಟಿದ್ದಳು. ಸಮಾಧಾನಿಸಿ ಕರೆತಂದಾಗ, ಅವಳು ನಿನ್ನ ಬಿಟ್ಟು ಹೋಗಿದ್ದಕ್ಕೆಅಲ್ಲವೇನೋ ನಾನು ನಿನಗೆ ಜೊತೆಯಾದದ್ದು. ಅವಳಿಗೊಂದು thanks ಹೇಳಿ ಬಿಡೋ" ಎಂದಾಗ ನಾ ನಕ್ಕು ನೀನು ಬಿಟ್ಟು ಹೋದದ್ದಕ್ಕೆ Thanks ಎಂದು ಬಿಟ್ಟೆ.!


ಅವಳ ಅದೇ ಆ ಮೊಂಡು ಹಠ, ಮುದ್ದು ಮಾತು, ಮುಗ್ಧ ನಗು, ತುಂಟಾಟ. ಸುಳ್ಳು ಸುಳ್ಳೇ ಆಡುವ ಜಗಳ. ಎಲ್ಲವೂ ನೆನಪಿಸುವುದು ಒಂದು ಮಗುವನ್ನು.! ಅದೇ ನನ್ನನ್ನು ಅವಳ ಹತ್ತಿರಕ್ಕೆ ಎಳೆದು ತಂದದ್ದು. ". ಈಗ ಅನಿಸುತ್ತಿದೆ ಇಂಥದ್ದೇ ಹುಡುಗಾಟದ ಹುಡುಗಿಯನ್ನೇ ನಾನು ಜೀವನದಲ್ಲಿ ಬಯಸಿದ್ದು ಎಂದು. !


ಇವಳು :
Hello Stupid,
ಪ್ರೀತಿಯಲಿ ನಂಬಿಕೆ ಇಲ್ಲದವಳಿಗೆ, ನಿಷ್ಕಲ್ಮಶ ಪ್ರೀತಿಯ ಅರ್ಥ, ಉದ್ದ ಅಗಲ ತಿಳಿಸಿಕೊಟ್ಟಿದ್ದಕ್ಕೆ thanks ಹೇಳುವುದಿಲ್ಲ.! ಬದಲಾಗಿ ಅದೇ ಪ್ರೀತಿಯನ್ನು ಕೊಡುತ್ತೇನೆ.

ನಿನ್ನಲ್ಲಿ ಜೀವನದ ಹಲವು ಸಂಬಂಧಗಳನ್ನು ಹುಡುಕಿದ್ದೇನೆ. ಎಲ್ಲ ವಿಷಯಗಳನ್ನು ನಿನ್ನಹತ್ರ ಹೇಳಿ ತಲೆ ತಿಂತಾ ಇರ್ತೇನೆ ಅಲ್ವಾ ?? ಅತಿ ಆದಾಗ ನೀನು ನನ್ನ ತಲೆಗೊಂದು ಮೊಟಕಿ "ಸುಮ್ನಿರೇ" ಅಂತಿದ್ದೆ ನೋಡು.. !ಆಗ ನಿನ್ನಲ್ಲಿ ಒಬ್ಬ ಆತ್ಮೀಯ ಸ್ನೇಹಿತ ಕಾಣ್ತಾನೆ. ಆ ದಿನ ನನ್ನ ಕೈಹಿಡಿದು road ದಾಟಿಸೋವಾಗ ಯಾಕೋ ನನ್ನ ಪಪ್ಪಾ ಥರ ಅನಿಸಿಬಿಟ್ಟೆ ಮಾರಾಯ. ನೀನು ಕಾಲು ಕೆರೆದು ಜಗಳಕ್ಕೆ ಬರೋವಾಗ ನೆನಪಾಗೋನು ನನ್ನ ಅಣ್ಣ.. !!ಮೊನ್ನೆ ಮೊನ್ನೆ ನಾನು ಮೊಣಕಾಲು ಉದ್ದದ skirt ಹಾಕ್ಕೊಂಡು ಬಂದಾಗ ಅದೇನು ಗುರಾಯಿಸಿ ಬಯ್ದಿದ್ದೆ ..?? ನನ್ನ ಕಣ್ಣಲ್ಲಿ ಜೋಗ ಜಿನುಗುವಷ್ಟು... ಕಣ್ಣೀರು ಒರೆಸುತ್ತ ನಿನ್ನ ನೋಡಿದ್ದೆ ನೆನಪುಂಟಾ? ನನ್ನ ಅಜ್ಜಿ ನೆನಪಾಗಿ , ಕಣ್ಣೀರ ಅಂಚಿನಲ್ಲೂ ನಕ್ಕಿದ್ದೆ ನಾನು.

ಮರೆತೇ ಹೋಗಿತ್ತಲ್ಲೋ, ನಿನ್ನೆ ನಿನ್ನ ಹಳೆ ಹುಡುಗಿಯ ಹುಟ್ಟಿದ ಹಬ್ಬ ಅಲ್ವಾ ? wish ಮಾಡಿದ್ಯಾ? ಇನ್ನೂ ನೆನಪಿಗೆ ಬರ್ತಾಳಾ ? ಗಂಡನ ಜೊತೆ ಆಚರಿಸಿರುತ್ತಾಳೆ ಬಿಡು. ನಿನ್ನ ಮೊಗವೇ ಮರೆತು ಹೋದಂಗಿದೆ ಮಾರಾಯ. ಇವತ್ತು ಸಂಜೆ ಸಿಗ್ತೀಯಾ?

ಇನ್ನೂ ಒಂದು ವಿಷ್ಯ. ನಿನ್ನ ಹಳೆ ಹುಡುಗಿಗಿಂತ ಜಾಸ್ತಿ ನನ್ನ ಪ್ರೀತಿಸ್ತಿದೀಯಾ ಅಲ್ವಾ? ನಂಗೂ ನಿನ್ ಹತ್ರ ಉದ್ದದ ಜಡೆ ಕಟ್ಟಿಸ್ಕೊಬೇಕು ಅನ್ನಿಸ್ತಿದೆ. ಉದ್ದದ ಕೂದಲು ಬಿಡ್ತೇನೆ. ಜಡೆ ಹಾಕ್ಕೊಡ್ತೀಯಲ್ವಾ ?